143
ಸ್ತುತಿಗೀತೆ. ರಚನೆಗಾರ: ದಾವೀದ. 
 1 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು. 
ನನ್ನ ಬಿನ್ನಹಕ್ಕೆ ಕಿವಿಗೊಡು. 
ನಿನ್ನ ನೀತಿಗೂ ನಂಬಿಗಸ್ತಿಕೆಗೂ ತಕ್ಕಂತೆ ನನ್ನ ಪ್ರಾರ್ಥನೆಗೆ ಉತ್ತರ ಕೊಡು. 
 2 ನಿನ್ನ ಸೇವಕನಾದ ನನಗೆ ತೀರ್ಪುಮಾಡಬೇಡ. 
ನನ್ನ ಇಡೀ ಜೀವಮಾನದಲ್ಲಿ ನಿರಪರಾಧಿಯೆಂಬ ತೀರ್ಪನ್ನು ಹೊಂದಲು ನನಗೆ ಸಾಧ್ಯವೇ ಇಲ್ಲ. 
 3 ಆದರೆ ನನ್ನ ಶತ್ರುಗಳು ನನ್ನನ್ನು ಬೆನ್ನಟ್ಟುತ್ತಿದ್ದಾರೆ. 
ಅವರು ನನ್ನ ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾರೆ. 
ಬಹುಕಾಲದ ಹಿಂದೆ ಸತ್ತವರನ್ನು ಕಾರ್ಗತ್ತಲೆಯ ಸಮಾಧಿಗೆ ನೂಕುವಂತೆ 
ಅವರು ನನ್ನನ್ನು ನೂಕುತ್ತಿದ್ದಾರೆ. 
 4 ನನ್ನ ಆತ್ಮವು ಕುಂದಿಹೋಗಿದೆ. 
ನನ್ನ ಧೈರ್ಯವು ಕಳೆದುಹೋಗುತ್ತಿದೆ. 
 5 ಆದರೆ ಬಹುಕಾಲದ ಹಿಂದೆ ನಡೆದವುಗಳನ್ನು ಜ್ಞಾಪಿಸಿಕೊಳ್ಳುವೆನು. 
ನೀನು ಮಾಡಿದ ಅನೇಕ ಅದ್ಭುತಕಾರ್ಯಗಳನ್ನು ಆಲೋಚಿಸುವೆನು. 
 6 ನನ್ನ ಕೈಗಳನ್ನು ಮೇಲೆತ್ತಿ ನಿನಗೆ ಪ್ರಾರ್ಥಿಸುವೆನು. 
ಒಣಭೂಮಿಯು ಮಳೆಗಾಗಿ ಕಾಯುವಂತೆ ನಾನು ನಿನ್ನ ಸಹಾಯಕ್ಕಾಗಿ ಕಾಯುತ್ತಿದ್ದೇನೆ. 
 7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು. 
ನನ್ನ ಆತ್ಮವು ಕುಂದಿಹೋಗುತ್ತಿದೆ. 
ನೀನು ನನಗೆ ವಿಮುಖನಾಗಬೇಡ. 
ಸತ್ತು ಸಮಾಧಿಯಲ್ಲಿರುವವರಂತೆ ನನ್ನನ್ನು ಸಾವಿಗೀಡು ಮಾಡಬೇಡ. 
 8 ಮುಂಜಾನೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು. 
ನಾನು ನಿನ್ನಲ್ಲಿ ಭರವಸವಿಟ್ಟಿದ್ದೇನೆ. 
ನಾನು ಮಾಡಬೇಕಾದವುಗಳನ್ನು ನನಗೆ ತೋರಿಸು. 
ನಾನು ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿದ್ದೇನೆ! 
 9 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ; 
ಶತ್ರುಗಳಿಂದ ನನ್ನನ್ನು ರಕ್ಷಿಸು. 
 10 ನಿನ್ನ ಇಚ್ಛೆಗನುಸಾರವಾಗಿ ನಾನು ಮಾಡಬೇಕಾದುದನ್ನು ನನಗೆ ತೋರಿಸಿಕೊಡು. 
ನೀನೇ ನನ್ನ ದೇವರು. 
ನನಗೆ ಒಳ್ಳೆಯವನಾಗಿದ್ದು ಸುರಕ್ಷಿತವಾದ ದಾರಿಯಲ್ಲಿ ನಡೆಸು. 
 11 ಯೆಹೋವನೇ, ನನ್ನನ್ನು ಉಜ್ಜೀವಿಸಮಾಡು. 
ಆಗ ಜನರು ನಿನ್ನ ಹೆಸರನ್ನು ಕೊಂಡಾಡುವರು. 
ನೀನು ನಿಜವಾಗಿಯೂ ಒಳ್ಳೆಯವನೆಂಬುದನ್ನು ನನಗೆ ತೋರಿಸಿಕೊಡು. 
ನನ್ನನ್ನು ಶತ್ರುಗಳಿಂದ ರಕ್ಷಿಸು. 
 12 ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು. 
ನನ್ನನ್ನು ಕೊಲ್ಲಬೇಕೆಂದಿರುವ ಶತ್ರುಗಳನ್ನು ಸೋಲಿಸು. 
ನಾನು ನಿನ್ನ ಸೇವಕನಾಗಿರುವೆ.