ಮತ್ತಾಯನ 
ಸುವಾರ್ತೆ  
 1
ಯೇಸುವಿನ ವಂಶಾವಳಿ 
(ಲೂಕ 3:23-38) 
 1 ಯೇಸು ಕ್ರಿಸ್ತನ ವಂಶಾವಳಿಯಿದು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು. 
 2 ಅಬ್ರಹಾಮನು ಇಸಾಕನ ತಂದೆ. 
ಇಸಾಕನು ಯಾಕೋಬನ ತಂದೆ. 
ಯಾಕೋಬನು ಯೆಹೂದ ಮತ್ತು ಅವನ ಸಹೋದರರ ತಂದೆ. 
 3 ಯೆಹೂದನು ಪೆರೆಚನ ಮತ್ತು ಜೆರಹನ ತಂದೆ. (ಅವರ ತಾಯಿ ತಾಮರಳು.) 
ಪೆರೆಚನು ಹೆಚ್ರೋನನ ತಂದೆ. 
ಹೆಚ್ರೋನನು ಅರಾಮನ ತಂದೆ. 
 4 ಅರಾಮನು ಅಮ್ಮಿನಾದಾಬನ ತಂದೆ. 
ಅಮ್ಮಿನಾದಾಬನು ನಹಶೋನನ ತಂದೆ. 
ನಹಶೋನನು ಸಲ್ಮೋನನ ತಂದೆ. 
 5 ಸಲ್ಮೋನನು ಬೋವಜನ ತಂದೆ. (ಬೋವಜನ ತಾಯಿ ರಹಾಬಳು.) 
ಬೋವಜನು ಓಬೇದನ ತಂದೆ. (ಓಬೇದನ ತಾಯಿ ರೂತಳು.) 
ಓಬೇದನು ಇಷಯನ ತಂದೆ. 
 6 ಇಷಯನು ಅರಸನಾದ ದಾವೀದನ ತಂದೆ. 
ದಾವೀದನು ಸೊಲೊಮೋನನ ತಂದೆ. (ಸೊಲೊಮೋನನ ತಾಯಿ ಊರೀಯನ ಹೆಂಡತಿಯಾಗಿದ್ದಳು.) 
 7 ಸೊಲೊಮೋನನು ರೆಹಬ್ಬಾಮನ ತಂದೆ. 
ರೆಹಬ್ಬಾಮನು ಅಬೀಯನ ತಂದೆ. 
ಅಬೀಯನು ಆಸನ ತಂದೆ. 
 8 ಆಸನು ಯೆಹೋಷಾಫಾಟನ ತಂದೆ. 
ಯೆಹೋಷಾಫಾಟನು ಯೆಹೋರಾಮನ ತಂದೆ. 
ಯೆಹೋರಾಮನು ಉಜ್ಜೀಯನ ತಂದೆ. 
 9 ಉಜ್ಜೀಯನು ಯೋತಾಮನ ತಂದೆ. 
ಯೋತಾಮನು ಆಹಾಜನ ತಂದೆ. 
ಆಹಾಜನು ಹಿಜ್ಕೀಯನ ತಂದೆ. 
 10 ಹಿಜ್ಕೀಯನು ಮನಸ್ಸೆಯ ತಂದೆ. 
ಮನಸ್ಸೆಯು ಆಮೋನನ ತಂದೆ. 
ಆಮೋನನು ಯೋಷೀಯನ ತಂದೆ. 
 11 ಯೋಷೀಯನು ಯೆಕೊನ್ಯ ಮತ್ತು ಅವನ ಸಹೋದರರ ತಂದೆ. (ಈ ಸಮಯದಲ್ಲಿಯೇ ಯೆಹೂದ್ಯ ಜನರನ್ನು ಗುಲಾಮಗಿರಿಗಾಗಿ ಬಾಬಿಲೋನಿಗೆ ಕೊಂಡೊಯ್ದದ್ದು.) 
 12 ಯೆಹೂದ್ಯರನ್ನು ಬಾಬಿಲೋನಿಗೆ ಕೊಂಡೊಯ್ದ ನಂತರದ ಕುಟುಂಬದ ಚರಿತ್ರೆ: 
ಯೆಕೊನ್ಯನು ಶೆಯಲ್ತಿಯೇಲನ ತಂದೆ. 
ಶೆಯಲ್ತಿಯೇಲನು ಜೆರುಬ್ಬಾಬೆಲನ ತಂದೆ. 
 13 ಜೆರುಬ್ಬಾಬೆಲನು ಅಬಿಹೂದನ ತಂದೆ. 
ಅಬಿಹೂದನು ಎಲ್ಯಕೀಮನ ತಂದೆ. 
ಎಲ್ಯಕೀಮನು ಅಜೋರನ ತಂದೆ. 
 14 ಅಜೋರನು ಸದೋಕನ ತಂದೆ. 
ಸದೋಕನು ಅಖೀಮನ ತಂದೆ. 
ಅಖೀಮನು ಎಲಿಹೂದನ ತಂದೆ. 
 15 ಎಲಿಹೂದನು ಎಲಿಯಾಜರನ ತಂದೆ. 
ಎಲಿಯಾಜರನು ಮತ್ತಾನನ ತಂದೆ. 
ಮತ್ತಾನನು ಯಾಕೋಬನ ತಂದೆ. 
 16 ಯಾಕೋಬನು ಯೋಸೇಫನ ತಂದೆ. 
ಯೋಸೇಫನು ಮರಿಯಳ ಗಂಡ. 
ಮರಿಯಳು ಯೇಸುವಿನ ತಾಯಿ. 
ಯೇಸುವನ್ನು ಕ್ರಿಸ್ತ * ಕ್ರಿಸ್ತನು ಇದರರ್ಥ “ಅಭಿಷಿಕ್ತನು” (ಮೆಸ್ಸೀಯನು) ಅಥವಾ ‘ದೇವರಿಂದ ಆರಿಸಲ್ಪಟ್ಟವನು.’ ನೆಂದು ಕರೆಯುತ್ತಿದ್ದರು. 
 17 ಅಬ್ರಹಾಮನಿಂದಿಡಿದು ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು. ದಾವೀದನಿಂದಿಡಿದು ಬಾಬಿಲೋನಿಗೆ ಸೆರೆಯೊಯ್ದ ಸಮಯದವರೆಗೆ ಹದಿನಾಲ್ಕು ತಲೆಮಾರುಗಳು. ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದಂದಿನಿಂದ ಕ್ರಿಸ್ತನು ಹುಟ್ಟುವವರೆಗೆ ಹದಿನಾಲ್ಕು ತಲೆಮಾರುಗಳು. 
ಯೇಸು ಕ್ರಿಸ್ತನ ಜನನ 
(ಲೂಕ 2:1-7) 
 18 ಯೇಸು ಕ್ರಿಸ್ತನ ತಾಯಿ ಮರಿಯಳು. ಯೇಸುವಿನ ಜನನ ಈ ರೀತಿ ಸಂಭವಿಸಿತು: ಮದುವೆಮಾಡಿಕೊಳ್ಳಲು ಯೋಸೇಫನಿಗೂ ಮರಿಯಳಿಗೂ ನಿಶ್ಚಿತಾರ್ಥವಾಗಿತ್ತು. ಆದರೆ ಮದುವೆಗೆ ಮೊದಲೇ ತಾನು ಗರ್ಭಿಣಿಯಾಗಿರುವುದು ಮರಿಯಳಿಗೆ ತಿಳಿದುಬಂತು. ಮರಿಯಳು ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಳು.  19 ಮರಿಯಳನ್ನು ಮದುವೆಯಾಗಲಿದ್ದ ಯೋಸೇಫನು ನೀತಿವಂತನಾಗಿದ್ದನು. ಮರಿಯಳನ್ನು ಜನರ ಮುಂದೆ ನಾಚಿಕೆಪಡಿಸಲು ಅವನು ಇಷ್ಟಪಡಲಿಲ್ಲ. ಆದ್ದರಿಂದ ಅವನು ಗುಟ್ಟಾಗಿ ನಿಶ್ಚಿತಾರ್ಥವನ್ನು ರದ್ದುಗೊಳಿಸಬೇಕೆಂದಿದ್ದನು. 
 20 ಯೋಸೇಫನು ಹೀಗೆ ಆಲೋಚಿಸಿಕೊಂಡನಂತರ, ಪ್ರಭುವಿನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡನು. ಆ ದೂತನು, “ದಾವೀದನ ಮಗನಾದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯಾಗಿ ಸ್ವೀಕರಿಸಲು ಭಯಪಡಬೇಡ. ಆಕೆ ಪವಿತ್ರಾತ್ಮನ ಪ್ರಭಾವದಿಂದ ಗರ್ಭಿಣಿಯಾಗಿದ್ದಾಳೆ.  21 ಆಕೆ ಒಬ್ಬ ಮಗನನ್ನು ಹೆರುವಳು. ನೀನು ಆ ಮಗುವಿಗೆ ಯೇಸು ಎಂದು ಹೆಸರಿಡುವೆ. ನೀನು ಆತನಿಗೆ ಆ ಹೆಸರನ್ನೇ ಇಡು; ಏಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು” ಎಂದು ಹೇಳಿದನು. 
 22 ಪ್ರವಾದಿಯ ಮೂಲಕ ಪ್ರಭು ತಿಳಿಸಿದ್ದೆಲ್ಲ ನೆರವೇರುವಂತೆ ಇದೆಲ್ಲಾ ನಡೆಯಿತು.  23 ಅದೇನೆಂದರೆ: “ಕನ್ನಿಕೆಯೊಬ್ಬಳು ಗರ್ಭಿಣಿಯಾಗಿ ಒಬ್ಬ ಮಗನಿಗೆ ಜನ್ಮ ಕೊಡುತ್ತಾಳೆ. ಆತನಿಗೆ ಇಮ್ಮಾನುವೇಲ್ ಎಂಬ ಹೆಸರನ್ನು ಇಡುವರು.”✡ ಉಲ್ಲೇಖನ: ಯೆಶಾಯ 7:14. (ಇಮ್ಮಾನುವೇಲ್ ಎಂದರೆ “ದೇವರು ನಮ್ಮ ಸಂಗಡ ಇದ್ದಾನೆ” ಎಂದರ್ಥ.) 
 24 ಯೋಸೇಫನು ಎಚ್ಚರಗೊಂಡ ಮೇಲೆ ಪ್ರಭುವಿನ ದೂತನು ಕನಸಿನಲ್ಲಿ ಹೇಳಿದ್ದಂತೆಯೇ ಮರಿಯಳನ್ನು ಪತ್ನಿಯನ್ನಾಗಿ ಸ್ವೀಕರಿಸಿಕೊಂಡನು.  25 ಆದರೆ ಮರಿಯಳು ಮಗನನ್ನು ಹೆರುವ ತನಕ ಯೋಸೇಫನು ಅವಳೊಂದಿಗೆ ಶರೀರ ಸಂಬಂಧವಿಲ್ಲದೆ ಇದ್ದನು. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು. 
*1:16: ಕ್ರಿಸ್ತನು ಇದರರ್ಥ “ಅಭಿಷಿಕ್ತನು” (ಮೆಸ್ಸೀಯನು) ಅಥವಾ ‘ದೇವರಿಂದ ಆರಿಸಲ್ಪಟ್ಟವನು.’
✡1:23: ಉಲ್ಲೇಖನ: ಯೆಶಾಯ 7:14.