7
ನಲ್ಲ 
 1 ರಾಜಪುತ್ರಿಯೇ, ಪಾದರಕ್ಷೆಗಳಲ್ಲಿನ ನಿನ್ನ ಪಾದಗಳು ಎಷ್ಟೋ ಅಂದ! 
ದುಂಡಾದ ನಿನ್ನ ತೊಡೆಗಳು ಕುಶಲ ಶಿಲ್ಪಿಯು ಮಾಡಿದ ಆಭರಣಗಳಂತಿವೆ. 
 2 ನಿನ್ನ ಹೊಕ್ಕಳು ಮಿಶ್ರಪಾನ ತುಂಬಿದ ಗುಂಡು ಬಟ್ಟಲು, 
ನಿನ್ನ ಹೊಟ್ಟೆ ನೆಲದಾವರೆಗಳಿಂದ ಅಲಂಕೃತವಾದ ಗೋದಿಯ ರಾಶಿ. 
 3 ನಿನ್ನ ಸ್ತನಗಳೆರಡೂ ಜಿಂಕೆಯ ಅವಳಿಮರಿಗಳಂತಿವೆ. 
 4 ನಿನ್ನ ಕೊರಳು ದಂತದ ಗೋಪುರ, 
ನಿನ್ನ ನೇತ್ರಗಳು ಹೆಷ್ಬೋನಿನಲ್ಲಿನ ಬತ್ ರಬ್ಬೀಮ್ ಬಾಗಿಲ ಬಳಿಯ ಕೊಳಗಳಂತಿವೆ. 
ನಿನ್ನ ಮೂಗು ದಮಸ್ಕದ ಕಡೆಗಿರುವ ಲೆಬನೋನಿನ ಬುರುಜಿನಂತಿದೆ. 
 5 ಕರ್ಮೆಲ್ ಬೆಟ್ಟದಂತೆ ಗಂಭೀರವಾಗಿದೆ ನಿನ್ನ ಶಿರಸ್ಸು, 
ನಿನ್ನ ತಲೆಗೂದಲಿಗಿದೆ ಥಳಥಳಿಸುವ ನುಣುಪುಹೊಳಪಿನ ಬಣ್ಣ, 
ಅದರಲ್ಲಿದೆ ಅರಸನನ್ನೇ ಸೆರೆಹಿಡಿಯುವಂಥ ಆಕರ್ಷಣೆ. 
 6 ಪ್ರೇಯಸಿಯೇ, ಸಕಲ ಸೌಂದರ್ಯ ಸೊಬಗಿನಿಂದ 
ನೀನೆಷ್ಟು ಸುಂದರ, ನೀನೆಷ್ಟು ಮನೋಹರ! 
 7 ನೀಳವಾದ ನಿನ್ನ ಆಕಾರವು ಖರ್ಜೂರದ ಮರ, 
ನಿನ್ನ ಸ್ತನಗಳೇ ಅದರ ಗೊಂಚಲುಗಳು. 
 8 ನಾನು ಆ ಮರವನ್ನು ಹತ್ತಿ, ರೆಂಬೆಗಳನ್ನು ಹಿಡಿಯುವೆನು ಅಂದುಕೊಂಡೆನು. 
ನಿನ್ನ ಸ್ತನಗಳು ನನಗೆ ದ್ರಾಕ್ಷಿಯ ಗೊಂಚಲುಗಳಂತಿರಲಿ, 
ಸೇಬುಹಣ್ಣಿನ ಪರಿಮಳದಂತೆ ನಿನ್ನ ಉಸಿರು. 
ನಲ್ಲೆ 
 9 ನಿನ್ನ ಚುಂಬನ ಉತ್ತಮ ದ್ರಾಕ್ಷಾರಸದ ಹಾಗಿರಲಿ,* 7:9 ಉತ್ತಮ ದ್ರಾಕ್ಷಾರಸದ ಹಾಗಿರಲಿ, ಅಥವಾ ನಿನ್ನ ಬಾಯು ಉತ್ತಮ ದ್ರಾಕ್ಷಾರಸದಂತಿರಲಿ. 
ನಿದ್ರಿಸುವವರ ತುಟಿಗಳಲ್ಲಿ ನಯವಾಗಿ ಹರಿಯುವ ಈ ರಸವು ನನ್ನ ನಲ್ಲೆಯಾದ ನಿನ್ನಲ್ಲಿಯೂ ಮೆಲ್ಲನೆ ಇಳಿದು ಬರುವುದು. 
 10 ನಾನು ನನ್ನ ನಲ್ಲನ ನಲ್ಲೆ, 
ಅವನ ಆಶೆಯು ನನ್ನ ಮೇಲೆ. 
 11 ಎನ್ನಿನಿಯನೇ, ವನಕ್ಕೆ ಹೋಗೋಣ ಬಾ, 
ಹಳ್ಳಿಗಳ ಮಧ್ಯದಲ್ಲಿ ವಾಸಮಾಡುವ† 7:11 ಹಳ್ಳಿಗಳ ಮಧ್ಯದಲ್ಲಿ ವಾಸಮಾಡುವ ಅಥವಾ ಅಡವಿಯ ಹೂವುಗಳ ಮಧ್ಯದಲ್ಲಿ ವಾಸಮಾಡುವ.! 
 12 ತೋಟಗಳಿಗೆ ಹೊತ್ತಾರೆ ಹೊರಟು ದ್ರಾಕ್ಷಿಯು ಚಿಗುರಿದೆಯೋ, 
ಅದರ ಹೂವು ಅರಳಿದೆಯೋ, ದಾಳಿಂಬೆ ಹೂ ಬಿಟ್ಟಿದೆಯೋ ನೋಡೋಣ ಬಾ, 
ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ಸಲ್ಲಿಸುವೆನು. 
 13 ಕಾಮಜನಕ ವೃಕ್ಷಗಳು‡ 7:13 ಕಾಮಜನಕ ವೃಕ್ಷಗಳು ಮ್ಯಾಂಡ್ರೇಕ್ಸ್: ಅತ್ಯಂತ ಸಿಹಿಯಾದ ವಾಸನೆಯ ಹೂವುಗಳುಳ್ಳ, ಲೈಂಗಿಕ ಆಸೆಯನ್ನು ಹುಟ್ಟಿಸುವ ಮತ್ತು ಫಲವತ್ತತೆಯನ್ನು ಉತ್ತೇಜಿಸುವ ಹಣ್ಣನ್ನು ಉತ್ಪತ್ತಿ ಮಾಡುವ ಒಂದು ವೃಕ್ಷವಾಗಿದೆ ಎಂದು ನಂಬಲಾಗಿದೆ (ಆದಿ 30:14-16). ಪರಿಮಳ ಬೀರುತ್ತಿವೆ, ನನ್ನ ಕಾಂತನೇ, 
ನಾನು ನಿನಗಾಗಿ ಇಟ್ಟುಕೊಂಡ ಒಳ್ಳೊಳ್ಳೆಯ, ಬಗೆಬಗೆಯ ಹಳೆಯ ಮತ್ತು ಹೊಸ ಹಣ್ಣುಗಳು 
ನಮ್ಮ ಬಾಗಿಲುಗಳ ಬಳಿ ಸಿದ್ಧವಾಗಿವೆ. 
*7:9 7:9 ಉತ್ತಮ ದ್ರಾಕ್ಷಾರಸದ ಹಾಗಿರಲಿ, ಅಥವಾ ನಿನ್ನ ಬಾಯು ಉತ್ತಮ ದ್ರಾಕ್ಷಾರಸದಂತಿರಲಿ.
†7:11 7:11 ಹಳ್ಳಿಗಳ ಮಧ್ಯದಲ್ಲಿ ವಾಸಮಾಡುವ ಅಥವಾ ಅಡವಿಯ ಹೂವುಗಳ ಮಧ್ಯದಲ್ಲಿ ವಾಸಮಾಡುವ.
‡7:13 7:13 ಕಾಮಜನಕ ವೃಕ್ಷಗಳು ಮ್ಯಾಂಡ್ರೇಕ್ಸ್: ಅತ್ಯಂತ ಸಿಹಿಯಾದ ವಾಸನೆಯ ಹೂವುಗಳುಳ್ಳ, ಲೈಂಗಿಕ ಆಸೆಯನ್ನು ಹುಟ್ಟಿಸುವ ಮತ್ತು ಫಲವತ್ತತೆಯನ್ನು ಉತ್ತೇಜಿಸುವ ಹಣ್ಣನ್ನು ಉತ್ಪತ್ತಿ ಮಾಡುವ ಒಂದು ವೃಕ್ಷವಾಗಿದೆ ಎಂದು ನಂಬಲಾಗಿದೆ (ಆದಿ 30:14-16).